ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಭಾರತೀಯ ಲೇಖಕ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.
- ಬೇರೆಯವರ ಬುದ್ದಿವಾದಕ್ಕೆ ಕಿವಿಕೊಡುವ ಸದ್ಬುದ್ದಿ ಇದ್ದರೆ ನಾವು ನಮ್ಮ ಜೀವನದಲ್ಲಿನ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು.
- ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.
- ನಾವು ಯಾವ ರೀತಿ ಬದುಕುವುದಿಲ್ಲವೋ, ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.
- ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.
- ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ.
- ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ.
- ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ.
- ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯ ಈ ಪ್ರಪಂಚದಲ್ಲಿ?
- ತಲೆ ತಪ್ಪಿಸಿಕೊಂಡು ಎಲ್ಲೋ ಬದುಕಿ ಮುದಿಯಾಗಿ ಕಾರಣವಿಲ್ಲದೆ ಸಾಯುವುದಕ್ಕಿಂತ, ಸಕಾರಣವಾದ ಸಾವನ್ನು ಎದುರಿಸುವುದು ಎಷ್ಟೋ ವಾಸಿ.
- ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷೀ ಎಂದರೆ ಹೋಮೋಸೆಪಿಯನ್.
- ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ.
- ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು.
- ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ.
- ಮುಖ್ಯ ವಿಷಯ ಬಿಟ್ಟು ಅಡ್ಡ ದಾರಿ ತುಳಿಯಬೇಡಿ, ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತಿವಿ, ಕಾಲ ಸರೀತಾ ಇದೆ.
- ಎಷ್ಟನ್ನು ನಾವು ಕಣ್ಣಿಗೆ ಕಂಡರೂ ನೋಡದೆ ಬಿಟ್ಟಿದ್ದೇವೋ ಏನೋ.
- ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ.
- ಕುಂಬಾರನ ಸೂಕ್ಷ್ಮ ಕಸುಬುದಾರಿಕೆ, ಮೇದರವನ ಬುಟ್ಟಿ ಹೆಣೆಯುವ ಕಲೆಗಾರಿಕೆ ಮಾನ್ಯತೆ ಕಳೆದುಕೊಂಡು ಓದುಬರಹ, ಜ್ಞಾಪಕ ಶಕ್ತಿ, ಇಂಗ್ಲಿಷ್ ಮಾತುಗಳು ಪರೀಕ್ಷೆಗಳಲ್ಲಿ ಮೆರಿಟ್ಗಳಾದವು. ಮೇದರವನೂ, ಕುಂಬಾರನೂ, ಅಗಸನೂ ಮೆರಿಟ್ ಇಲ್ಲದವನಾಗಿ ಕೆಲಸ ಮತ್ತು ಅನ್ನ ಕಳೆದುಕೊಂಡ.
- ನಾನು ಕಣ್ಣಿಗೆ ಕಂಡದ್ದನ್ನೆಲ್ಲಾ ಆಸಕ್ತಿಯಿಂದ ಕುತೂಹಲದಿಂದ ನೋಡುತ್ತಾ ತಿಳಿಯುತ್ತಾ ಹೋಗುತ್ತೇನೆ. ಜ್ಞಾನಾರ್ಜನೆಯ ಪ್ರಚಂಡ ಸಂತೋಷ ಇರುವುದು ಇಲ್ಲೇ.
- ನನಗೆ ಕಷ್ಟಪಟ್ಟು ಓದಿದ್ದು ಗೊತ್ತೇ ಇಲ್ಲ. ಬರೇ ಕ್ಲಾಸಿನಲ್ಲಿ ಶ್ರದ್ಧೆಯಿಂದ ಪಾಠ ಕೇಳಿ ಮಾತ್ರವೇ ಈವರೆಗೂ ನಾನು ತರಗತಿಗಳಲ್ಲಿ ಪಾಸಾಗಿರುವವನು. ಆದರೆ ನಮಗೆ ಅಂಥ ವಿದ್ಯಾಗುರುಗಳು ದೊರತಿದ್ದರೆಂಬುದು ಇಲ್ಲಿ ಬಹುಮುಖ್ಯ. ಅವರಲ್ಲಿ ಪೂಜ್ಯ ಜಿ ಎಸ್ ಶಿವರುದ್ರಪ್ಪನವರು ಒಬ್ಬರೆಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.
- ಕತೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಹಾಕುತ್ತದೆಯಷ್ಟೆ.
- ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ.
- ಜನ್ಮಾಂತರ ಹಾಗೂ ಕರ್ಮ ಸಿದ್ಧಾಂತಗಳ ದೆಸೆಯಿಂದಲೇ ಒಬ್ಬ ಕಕ್ಕಸು ಬಳಿಯುವ ತೋಟಿಯೇ ಆಗಲಿ ಸತ್ತ ಎತ್ತನ್ನು ತಿನ್ನುವ ಹೊಲೆಯನೇ ಆಗಲಿ ತನ್ನ ದುರ್ದೆಸೆಯನ್ನು ತನ್ನ ಜನ್ಮಾಂತರಗಳಿಗೆ ಸಂಬಂಧ ಪಟ್ಟ ಪ್ರಾರಬ್ಧವನ್ನಾಗಿ ಪರಿಗಣಿಸುತ್ತಾನೆಯೇ ಹೊರತು ತನಗಾಗಿರುವ ವೈಯ್ಯಕ್ತಿಕ, ಸಾಮಾಜಿಕ ಅನ್ಯಾಯವನ್ನಾಗಿ ಪರಿಗಣಿಸುವುದೇ ಇಲ್ಲ.
- ಭಾವನೆಗಳು, ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ ಅಸ್ಥಿತ್ವವೇ ಇರುವುದಿಲ್ಲ.
- ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರಬುದ್ಧಿ, ಅಂಧಶ್ರದ್ಧೆ ಮೀರಲು ಸಾಧ್ಯವಾಗಿಲ್ಲ.
- ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು? ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!
- ‘ಮನುಷ್ಯ ಚರಿತ್ರೆಯಿಂದ ಪಾಠ ಕಲಿಯುವುದಿಲ್ಲ’ ಎನ್ನುವುದೇ ನಮಗೆ ಚರಿತ್ರೆ ಕಲಿಸುವ ಪಾಠ
- ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ.
- ತಾನು ನಿಯಂತ್ರಿಸಲಾಗದ ಅಮೂರ್ತದ ಅಗಾಧತೆಯ ಎದುರು ಮನುಷ್ಯನ ಕ್ರಿಯೆಗಳು ಅರ್ಥಹೀನವಾಗಿಯೂ ಹಾಸ್ಯಾಸ್ಪದವಾಗಿಯೂ ಕಾಣುತ್ತವೆ.
- ಮತ್ತೊಬ್ಬರು ಹೇಳಿದ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದಿದ್ದರೆ ನಾವು ನಮ್ಮ ಜೀವನದ ಎಷ್ಟೋ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದಿತ್ತು.
- ಎನನ್ನಾದರೂ ಅರ್ಥ ಮಾಡಿಕೊಳ್ಳಬೇಕೆಂದಿದ್ದರೆ ಅದನ್ನು ಕಲಿಯಲು ಪ್ರಯತ್ನಿಸುವುದು ಅದನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ಮಾರ್ಗ ಎಂದು ನನಗೆನ್ನಿಸುತ್ತದೆ
- ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ.ನಾವು ಪ್ರಕೃತಿಯ ಒಂದು ಭಾಗ.
- ಟೀಕೆಗಳಿಗೆ ನಮ್ಮ ಜೀವನ,ವ್ಯಕ್ತಿತ್ವ,ನಡವಳಿಕೆಗಳೇ ಉತ್ತರ ಹೇಳಬೇಕೇ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ.
- ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ನಾವು ಹಾಗೆ ನಟಿಸಲು ತೊಡಗಬಾರದು.
- ಮೊದಲೆಲ್ಲಾ ನಮ್ಮ ವರ್ತನೆಯನ್ನು ಹುಚ್ಚಾಟವೆಂದು ಪರಿಗಣಿಸಿ ನಗುತ್ತಿದ್ದವರು, ಕೊನೆಗೆ ನಮ್ಮ ಬದುಕೇ ಹೀಗೆ ಎಂದು ತಿಳಿದನಂತರ ನಗುವುದನ್ನು ನಿಲ್ಲಿಸಿದರು.
- ಸಾಕ್ಷಾಧಾರ ಇಲ್ಲದ ಯಾವುದನ್ನೂ ನಾನು ನಂಬೋದಿಲ್ಲ. ದೇವರನ್ನು ನಂಬೋದು ಬಿಡೋದು ಎಲ್ಲಾ ನಿರಪಯುಕ್ತ ಚರ್ಚೆ.
- ನನ್ನ ಕಥೆ ಕಾದಂಬರಿಗಳು ವಾಸ್ತವವಾಗಿ ನನ್ನ ಅನುಭವಗಳನ್ನೇನೂ ನಿಮಗೆ ಕೊಡುವುದಿಲ್ಲ. ನಿಮ್ಮೊಳಗೆ ಇದ್ದ ಆ ಅನುಭವಗಳನ್ನು ಉದ್ದೀಪನ ಮಾಡಿ ನಿಮಗೆ ತೋರಿಸಿಕೊಡುತ್ತವಷ್ಟೆ.
- ಓದುಗರು ಯಾರಾದರೂ ಕೃತಿಗಳನ್ನು ಓದಿ ಚೆನ್ನಾಗಿದೆ ಎಂದು ಸಂತೋಷಪಟ್ಟರೆ ನನಗೆ ಧನ್ಯನಾದೆ ಎನ್ನಿಸುತ್ತದೆ. ಅಂಥ ಹಲವು ಕೃತಿಗಳನ್ನು ಬರೆಯಲು ಪ್ರೋತ್ಸಾಹ ದೊರೆಯುತ್ತದೆ.
- ಕೆಲವೆಲ್ಲಾ ಮನುಷ್ಯನಿಗೆ ಅನುಭವಿಸಿದ ಮೇಲೇ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೋಗುವುದೇ ಇಲ್ಲ.
- ಧಿಡೀರ್ ಜನಪ್ರಿಯತೆ ನನಗೆಂದೂ ದೊರೆತೇ ಇಲ್ಲ. ನಾನು ನಿರೀಕ್ಷಿಸುವುದೂ ಇಲ್ಲ. ಓದುಗರು ನನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನನಗೆ ಅನ್ನಿಸಿದ್ದು ಇವತ್ತಲ್ಲದಿದ್ದರೆ ನಾಳೆ ನಿಧಾನವಾಗಿಯಾದರೂ ಅವರಿಗೂ ಅನ್ನಿಸುತ್ತದೆ ಎನ್ನುವ ನಂಬಿಕೆಯಿಂದಲೇ ನಾನು ಬರೆಯುವುದು.
- ನಾನು ಬರೆಯುವ ಪದಗಳ ಅರ್ಥವೇ ‘ಮನುಷ್ಯರೆಲ್ಲ ಒಂದೇ, ನನ್ನಂತೆಯೇ’ ಎನ್ನುವ ಆಳವಾದ ಶ್ರದ್ಧೆಯ ಮೇಲೆ ನಿಂತಿದೆ.
- ನನ್ನ ಕೃತಿಗಳಿಂದ ಕೆಲವಾದರೂ ಜನರಿಗೆ ಪರಿಸರದ ಬಗ್ಗೆ ಆಸಕ್ತಿ ಬಂದರೆ ನನ್ನ ಬರವಣಿಗೆ ಸಾರ್ಥಕವೆಂದೇ ತಿಳಿದಿದ್ದೇನೆ.
- ಮಾತನಾಡಬೇಕಾದಾಗಲೂ ಮಾತನಾಡದೆ ಸುಮ್ಮನಿದ್ದರೆ ಬಹಳ ಕೆಟ್ಟದ್ದು.
- ನೀವು ನಿಮ್ಮ ಬಗ್ಗೆ ಒಂದು ದೃಢ ನಿರ್ಧಾರ ತಗೊಳ್ಳಬೇಕು. ಕಾಲವೇ ತೀರ್ಮಾನಿಸುತ್ತದೆಂದು ಕೂರಬೇಡಿರಿ. ಕಾಲ ಎಲ್ಲವನ್ನೂ ಇನ್ನಷ್ಟು ಜಟಿಲ ಮಾಡುತ್ತದೆ.
- ಹೊರಗಿನ ಪ್ರಕೃತಿ ತೀರ ಕ್ರೂರವಾದಾಗ ನಮ್ಮೊಳಗಿನ ಪ್ರಕೃತಿ ನಮ್ಮ ಸಂವೇದನಾ ಶಕ್ತಿಯನ್ನೆ ಮೊಂಡು ಮಾಡಿಬಿಡುತ್ತದೆ.
- ವರ್ಗ ತಾರತಮ್ಯದಲ್ಲಿ ಒಬ್ಬ ಕಷ್ಟಪಟ್ಟು ದುಡಿದು ಶ್ರೀಮಂತನಾಗಿ ಮೇಲ್ವರ್ಗಕ್ಕೇ ಏರಬಹುದು, ಇಲ್ಲವೇ ದುಂದು ಮಾಡಿ ನಷ್ಟ ಕಟ್ಟಿಕೊಂಡು ಕೆಳವರ್ಗಕ್ಕೆ ಇಳಿಯಲು ಬಹುದು.ಆದರೆ ವರ್ಣ ತಾರತಮ್ಯದಲ್ಲಿ ಒಬ್ಬ ಹುಟ್ಟಿದಂದಿನಿಂದ ಸಾಯುವವರೆಗೆ ಯಾವ ವರ್ಣದಲ್ಲಿ ಹುಟ್ಟಿದನೋ ಅಲ್ಲೇ ಇರಬೇಕಾಗುತ್ತದೆ.
- ನಾವೆಲ್ಲ ಕೈಗೆ ವಾಚ್ ಕಟ್ಟಿಕೊಳ್ಳುತ್ತೇವೆ. ದಿನವೂ ಏಳುತ್ತಿದ್ದಂತೆಯೇ ಗಂಟೆ ನೋಡಿಕೊಳ್ಳುತ್ತಾ ನಮ್ಮ ದಿನವನ್ನು ಆರಂಭಿಸುತ್ತೇವೆ. ಹಣ ಸಂಪಾದಿಸಬಹುದು, ಆಸ್ತಿ ಸಂಪಾದಿಸಬಹುದು ಆದರೆ ಕಳೆದುಹೋಗುತ್ತಾ ಇರುವ ಕಾಲವನ್ನು ಮಾತ್ರ ಎಂದೆಂದೂ ಸಂಪಾದಿಸಲು ಸಾಧ್ಯವಿಲ್ಲ.
- ವಾಸ್ತವವನ್ನೇ ಆದರ್ಶಿಕರಿಸುವವನು ಅವಕಾಶವಾದಿಯಾಗುತ್ತಾನೆ. ವಾಸ್ತವವನ್ನೇ ತಿರಸ್ಕರಿಸಿ ಆದರ್ಶಗಳಿಗೆ ಜೋತುಬೀಳುವವನು ಉಗ್ರಗಾಮಿಯಾಗುತ್ತಾನೆ. ಆದರ್ಶಗಳನ್ನು ವಾಸ್ತವಿಕರಿಸುವ ಮಾರ್ಗದಲ್ಲಿ ವಾಸ್ತವದ ಅಪರಿಪೂರ್ಣತೆಯನ್ನು ಸಹಿಸಲೂ ಕಲಿಯುವವನು ಲಿಬರಲ್ ಆಗುತ್ತಾನೆ.
- ನಮ್ಮ ವರ್ತನೆ, ನಮ್ಮ ವ್ಯಕ್ತಿತ್ವ, ನಮ್ಮ ಪದಗಳಿಗೆ ಅರ್ಥ ಕೊಡುತ್ತೆ.
- ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು?
- ಒಬ್ಬ ಕಲಾವಿದನ ಮೇಲೆ, ಇನ್ನೊಬ್ಬ ದೊಡ್ಡ ಕಲಾವಿದನ ಪ್ರಭಾವಗಳು ಆಗೋದನ್ನ ಗುರುತಿಸುವುದು ಬಹಳ ಕಷ್ಟ. ಯಾಕೆ ಅಂತಾ ಹೇಳಿದರೆ, ಅವರು ನಿಮ್ಮ ಜೀವನದ ಮೇಲೆ ಪ್ರಭಾವ ಬೀರಿರುತ್ತಾರೆ ಹೊರತು, ನಿಮ್ಮ ಕೃತಿಗಳ ಮೇಲಲ್ಲ.
- ನನ್ನ ತಲೆಯಲ್ಲಿ ಆಗುತ್ತಿರುವ ಪ್ರಳಯವನ್ನು ನಾನಿನ್ನೂ ಶೇಕಡ ಹತ್ತರಷ್ಟು ಕೂಡ ಹೇಳಿಲ್ಲ.
- ಕೆಲವರು ಕಾಲ ಕಳೆಯೋದು ಹ್ಯಾಗೆ ಅಂತ ಲಾಟರಿ ಹೊಡೀತಾ ಇರ್ತಾರೆ. ನನಗೆ ಎಲ್ಲವೂ ಒಂದು ದಿನದಲ್ಲಿ ಮುಗಿದು ಹೋಗಿದೆ ಅನ್ನಿಸ್ತಿದೆ. ನಾನು ಅಂದುಕೊಂಡಿದ್ದನ್ನೆಲ್ಲಾ ಮಾಡಿ ಮುಗಿಸೋಕೆ ಇನ್ನೂ ಐವತ್ತು ವರ್ಷ ಆಯಸ್ಸುಬೇಕು ಕಣ್ರೀ.
- ನಾನು ಒಂದು ಯಾವಪಾಸಕನೂ ಅಲ್ಲ ಏನೂ ಅಲ್ಲ ಮಾರಾಯ, ಬಂದು ಬಂದಿದ್ದನ್ನೆಲ್ಲ INTEREST ಕಂಡಿದ್ದನ್ನೆಲ್ಲಾ ತಿಳ್ಕೊಳ್ತಾ, PARTICIPATE ಮಾಡ್ತಾ ಹೋಗ್ತಾ ಬಂದಿರೋನೇ ಹೊರತು, ಕೂತುಕೊಂಡು ಪಾಂಡಿತ್ಯ ಪಡೀಬೇಕು ಅನ್ನೋದು ಸುತಾರಾಂ ನನಗೆ ಇಷ್ಟ ಇಲ್ಲ.
- ಮುಂದೇನಾಗಬಹುದು ಎಂಬುದಕ್ಕೆ ಹಿಂದೇನಾಗಿತ್ತು ಎಂದು ತಿಳಿಯುವುದು ಬಹುಮುಖ್ಯ.
- ಅಪ್ಪಅಮ್ಮಂದಿರಿಗೆಲ್ಲ ತಿಳಿಸಿ ಬಂಧು ಭಾಂಧವರನ್ನೆಲ್ಲಾ ಸಂತೋಷ ಸಾಗರದಲ್ಲಿ ಮುಳುಗಿಸಿ ಮದುವೆಯಾಗಬೇಕು ಇತ್ಯಾದಿ ಭ್ರಮೆಯಿಂದ ನಾನು ಈಗ ಪಾರಾಗಿದ್ದೇನೆ. ನನ್ನ ಮದುವೆ ನನ್ನದೇ ಹೊರತು ಇನ್ಯಾರದ್ದೂ ಅಲ್ಲ.
- ಅಪ್ಪನ ಆಸ್ತಿಯ ಮೇಲೆ ಹೊಟ್ಟೆ ಹೊರೆಯುವ ಪರತಂತ್ರ ಜೀವಿಗೆ ಆತ್ಮವೇ ಇರುವುದಿಲ್ಲ.
- ಕೆಟ್ಟಮೇಲೆ ಬುದ್ಧಿ ಬಂತು ಅನ್ನೋ ಗಾದೆಯಿದೆಯಲ್ಲ ತಪ್ಪು. ಕೆಡ್ತಾ ಕೆಡ್ತಾ ಬುದ್ಧೀನೂ ಕೆಡ್ತಾ ರೋಗ ಜೋರಾಗ್ತಾ ಹೋಗುತ್ತೆ.
- ಸಾವಿನ ಭಯ ಹೋಗೋವರೆಗೂ ನೀವು ನಿಜವಾದ ಮನುಷ್ಯರಾಗೋಲ್ಲ ತಿಳ್ಕೊಳಿ.
- ಗಂಭೀರವಾಗಿ ಬದುಕಿ, ಗಂಭೀರವಾಗಿ ಸಾಯೋಣ.
- ನ್ಯಾಯವಾಗಿ ವಿಚಾರವಾದಿಗೆ ದೆವ್ವ ಇಲ್ಲ, ದೇವರು ಇಲ್ಲ ಅಂತ ತೀರ್ಮಾನ ಕೊಡೋ ಹಕ್ಕೇ ಇಲ್ಲ.
- ಕಣ್ಮುಂದೆ ನಡೆಯೋದನ್ನ ಯಾವನು ಸರಿಯಾಗಿ ನೋಡೋದು ಕಲಿತುಕೊಳ್ಳುವುದಿಲ್ಲವೋ, ಅವನಿಗೆ ಹಿಂದೇನಾಯ್ತುಂತಾನೂ ಗೊತ್ತಾಗೋದಿಲ್ಲ.
- ನನ್ನ ಕಾಲಮೇಲೆ ನಾನು ನಿಲ್ಲದೆ ಮದುವೆಯಾದರೆ ಗುಲಾಮೀಯತೆಗೆ ನನ್ನನ್ನು ಜೊತೆಗೆ ಇನ್ನೊಬ್ಬರನ್ನು ಗುರಿ ಮಾಡಿದಂತೆ. ಮಕ್ಕಳಾದರೆ ಗುಲಾಮರಿಗೆ ಜನ್ಮವಿತ್ತಂತೆ…
- ನಾವು ಮೌನದ ಭಾಷೆನ ಅರ್ಥ ಮಾಡಿಕೊಳ್ಳದಿದ್ದರೆ ಮಾತುಗಳನ್ನ ಅರ್ಥಮಾಡಿಕೊಳ್ಳೊ ಸೆನ್ಸಿಬಿಲಿಟಿ ಹೋಗಿಬಿಡುತ್ತದೆ. ನಾವು ಮಾತನಾಡುವಷ್ಟೇ ಮಾತನಾಡದೆ ಇರುವುದು ಅಗತ್ಯ.
- ಆಲೋಚನೆ ಅಭಿಪ್ರಾಯಗಳನ್ನು ಆಲೋಚನೆ ಅಭಿಪ್ರಾಯಗಳಿಂದ ಗೆಲ್ಲಲು ಸಾಧ್ಯವೇ ಹೊರತು ಬಲಪ್ರಯೋಗದಿಂದ ಕೊಲ್ಲಲು ಸಾಧ್ಯವೇ ಇಲ್ಲ.
- ಜಗತ್ತಿನಲ್ಲಿ ಯಾವುದೂ ಜಡವಲ್ಲ.
- ಯುದ್ಧ, ಕಲೆ, ಧರ್ಮ ಮೊದಲಾದವುಗಳ ಬೆಂಬಲದೊಂದಿಗೆ ಪ್ರತಿ ನಾಗರೀಕತೆಯೂ ತಾನು ವಿಶ್ವವ್ಯಾಪಿಯಾಗುವುದಕ್ಕೆ ಪ್ರಯತ್ನಿಸಿರುವುದು ಕಾಣುತ್ತದೆ.
- ಮತ್ತೊಬ್ಬರಿಗೆ ತೊಂದರೆ ಮಾಡಬಾರದು, ಮೊತ್ತೊಬ್ಬರಿಗೆ ಚೂರಿ ಹಾಕ್ಬಾರ್ದು ಅನ್ನೋದನ್ನು ನಾವು ಭಗವದ್ಗೀತೆ, ಖುರಾನ್, ಬೈಬಲ್ ಎಲ್ಲಾ ಓದಿ ತಿಳ್ಕೊಬೇಕಾದ ಅಗತ್ಯ ಇಲ್ಲ.
- ತಮ್ಮ ಆದರ್ಶಗಳನ್ನೂ ಆಶೋತ್ತರಗಳನ್ನೂ ಪುನಃ ಪುನಃ ಪಠಿಸುತ್ತಿದ್ದರೆ ತಮ್ಮಷ್ಟಕ್ಕೆ ತಾನೇ ಅವು ಕೈಗೂಡುತ್ತವೆಂಬ ನಂಬಿಕೆಯಿಂದಲೇ ಮಂತ್ರಘೋಷ, ಭಜನೆ, ಸಹಸ್ರನಾಮ, ಸ್ಮರಣೆ ಇವೆಲ್ಲಾ ನಮ್ಮ ಸಂಸ್ಕೃತಿಯಲ್ಲಿ ಜನಿಸಿದ್ದು.
- ಯಾರಿಗೆ ತಾವು ಇದ್ದಲ್ಲೇ ಎಲ್ಲವೂ ಕುತೂಹಲಕರವಾಗಿ ಇರುವುದಿಲ್ಲವೋ ಅವರು ಈ ಭೂಮಂಡಲದ ಮೇಲೆ ಎಲ್ಲಿ ಪ್ರವಾಸಬಯ್ಯೋದಿಕ್ಕಿಂತ ಸುಲಭವಾಗಿ ಹೊಗಳಿ ಹೊಗಳಿ ಒಬ್ಬನ್ನ ಹಾಳು ಮಾಡಿಬಿಡಬಹುದು. ಹೋದರೂ, *ಕುತೂಹಲಕರವಾಗಿ ಆಗಿ ಇರೋದಿಕ್ಕೆ ಆಗಲ್ಲ.
- ಕಾಲದೊಂದಿಗೆ ಸಂಸ್ಕೃತಿ ಬದಲಾಗುತ್ತಾ ಇರುತ್ತದೆ. ಬೇಕಾದದ್ದನ್ನು ಇಟ್ಟುಕೊಳ್ಳುತ್ತದೆ. ಬೇಡವಾದದ್ದನ್ನು ಬಿಡುತ್ತದೆ.
- ಚರಿತ್ರೆನೇ ಒಂದು ದಿಕ್ಕಲ್ಲಿ ಹೋಗ್ತಾ ಇರೋದು, ನೀವೇ ಒಂದು ದಿಕ್ಕಲ್ಲಿ ಯೋಚನೆ ಮಾಡ್ತಾ ಇರೋದು ಮಾಡಬಾರದು.
- ಕೆಲವು ವರ್ಷಗಳು ಮಾತ್ರ ಇರುವ ಈ ಅಮೂಲ್ಯ ಜೀವಿತ ಕಾಲದಲ್ಲಿ ಮುಸ್ಲಿಂ, ಹಿಂದೂ, ಒಕ್ಕಲಿಗ, ಲಿಂಗಾಯತ ಎಂದು ಹೆಸರು ಕೊಟ್ಟುಕೊಳ್ಳುತ್ತಾ ಧರ್ಮದ ನೆವದಲ್ಲಿ ಹೆಣ್ಣು ಮಕ್ಕಳನ್ನು ದೀನರನ್ನೂ ಹಿರಿದು ಹಿಂಸಿಸುತ್ತ ಜೀವನವನ್ನೆಲ್ಲಾ ನರಕವನ್ನಾಗಿಸುವುದರಲ್ಲಿ ಯಾವ ಸುಖ ಕಾಣುತ್ತೀರಿ?
- ಸಾಮಾನ್ಯರು ನ್ಯಾಯ ಪ್ರತಿಪಾದನೆಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿರುವುದು. ಕೊಲೆ, ವಂಚನೆ, ಲಂಚ, ನೀಚತನಗಳೆಲ್ಲ ತಮ್ಮ ವಿಧಿ ಮತ್ತು ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗಗಳೆಂದು ನಂಬತೊಡಗಿದ್ದಾರೆ. ಇಂಥ ನಿರಾಸೆಯ ಕತ್ತಲಲ್ಲೂ ಆಸೆ ಆಕಾಂಕ್ಷೆಗಳ ಬೆಳಕು ನಂದದಂತೆ ನೋಡಿಕೊಳ್ಳುವುದು ಪತ್ರಿಕೆಗಳ, ಬುದ್ಧಿಜೀವಿಗಳ ಕರ್ತವ್ಯ.
- ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.
- ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ.
- ಒಂದು ಭಾಷೆಯನ್ನು ಜನ ಎಲ್ಲಿಯವರೆಗೆ ಬಳಸುತ್ತಾರೋ ಅಲ್ಲಿಯವರಿಗೆ ಮಾತ್ರ ಅದು ಬದುಕಿರುತ್ತದೆ.