ಜಗತ್ತಿನಲ್ಲಿ ಬುದ್ಧಿವಂತರು ದೊರಕಬಹುದು. ಆದರೆ ಅವರನ್ನು ಒಂದುಗೂಡಿಸುವ ಯೋಜಕರು ದೊರಕುವುದು ದುರ್ಲಭ. - ೧೪:೫೪, ೯ ಮಾರ್ಚ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಜೀವನದಲ್ಲಿ ಎಲ್ಲರಿಗೂ ಗೆಲ್ಲಲೇಬೇಕೆಂಬ ಬಯಕೆ ಇರುತ್ತದೆ. ಆದರೆ ಬಯಸಿದಂತೆ ನಡೆಯುತ್ತದೆ ಎಂದೇನೂ ಇಲ್ಲ. ಬಯಸಿದ್ದು ಈಡೇರದೇ ಇದ್ದಾಗ ದು:ಖಿಸುವ ಅಗತ್ಯವಿಲ್ಲ. ಎಲ್ಲಿ ತಪ್ಪಿದೆವು ಎಂದು ಅವಲೋಕಿಸಿರಿ. ದಾರಿಯನ್ನು ಸರಿಪಡಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಿರಿ.
ಯಶಸ್ಸಿನ ಬೆನ್ನ ಹಿಂದೆಯೇ ಅತ್ಮವಿಶ್ವಾಸದಿಂದ ಜೀವಿಸುವದನ್ನು ರೂಢಿಸಿಕೊಳ್ಳಿರಿ. ಯಶಸ್ಸನ್ನು ಒಲಿಸಿಕೊಳ್ಳಿರಿ.
ನಾಳಿನ ಅತ್ಯುತ್ತಮ ಯೋಜನೆಗಿಂತ ಇಂದಿನ ಉತ್ತಮ ಯೋಜನೆಯೇ ಲೇಸು. ಎಂದಿಗೂ ಸಮಾಧಾನದಿಂದ ಹಿಂದೆ ನೋಡಬೇಕು.
ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ ಎಂಬ ಕೊರಗು ಬೇಡ. ಇದರ ಬದಲಿಗೆ ನನ್ನ ಹಾಗೆ ಯಾರೂ ಇಲ್ಲ ಎಂದು ಭಾವಿಸಿರಿ. ಎಲ್ಲ ವ್ಯಕ್ತಿಗಳೂ ವಿಭಿನ್ನ ಎಂಬ ಸತ್ಯವನ್ನು ಮರೆಯದಿರಿ. ಯೋಚನೆ ವಿಭಿನ್ನವಾಗಿದ್ದಲ್ಲಿ ಜೀವನವು ಸುಂದರವಾಗುತ್ತದೆ.
ದ್ವೇಷ, ಹೊಟ್ಟೆಕಿಚ್ಚು ಎಂದರೆ ನಾವು ವಿಷವನ್ನು ಸೇವಿಸಿ ಬೇರೆಯವರೇ ಸಾಯಲಿ ಎಂದು ಬಯಸಿದಂತೆ. ಆದರೆ ದ್ವೇಷಕ್ಕೆ ಬಲಿಯಾಗುವವರು ನಾವು. ದ್ವೇಷ ನಮ್ಮನ್ನು ಮೊದಲು ಸಾಯಿಸುತ್ತದೆ. ದ್ವೇಷದಿಂದ ಯಾವ ಪ್ರಯೋಜನವೂ ಇಲ್ಲ.
ನಾವೊಬ್ಬರೇ ಪರಸ್ಪರರ ವಿಚಾರವನ್ನು ಮಾತನಾಡುವ ಬದಲು ಎಲ್ಲರ ಜೊತೆಗೆ ನೇರವಾಗಿ ಮಾತನಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಮಾತಿನ ಹಿಂದೆ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ. ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು.
ಒಂದು ನಿಮಿಷದಲ್ಲಿ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯನ್ನು ತರಲಿಕ್ಕೆ ಸಾಧ್ಯವಿಲ್ಲ. ಆದರೆ ಪ್ರತಿ ನಿಮಿಷವನ್ನು ಸದ್ಬಳಕೆಯನ್ನು ಮಾಡಿಕೊಂಡದ್ದೇ ಆದಲ್ಲಿ ಅಸಾಧಾರಣ ಪರಿವರ್ತನೆ ನಿಮ್ಮಲ್ಲಿ ಆಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಸಮಯವನ್ನು ಹಾಳು ಮಾಡಬೇಡಿ
ನಾವು ಪದೇ ಪದೇ ಏನನ್ನು ಹೇಳುತ್ತೇವೆಯೋ, ಯೋಚಿಸುತ್ತೇವೆಯೋ ಮತ್ತೆ ಮಾಡುತ್ತೇವೆಯೋ ಅದೇ ಆಗಿರುತ್ತೇವೆ. ಆದ್ದರಿಂದ ಸದಾ ಸಕಾರಾತ್ಮಕ ಸಂಗತಿಗಳ ಬಗ್ಗೆ ಯೋಚಿಸಬೇಕು. ಆಗಲೆ ಉತ್ತಮ ಸಾಧನೆ ಮಾಡಲು ಸಾಧ್ಯ.
ನಿಮ್ಮ ಬಗೆಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಟೀಕೆಗಳಿಗೆ ಎಷ್ಟೇ ಸಮಜಾಯಿಷಿ ಕೊಟ್ಟರೂ ಅದರಿಂದ ಜನರಿಗೆ ಮನವರಿಕೆಯಾಗುವುದಿಲ್ಲ. ನಿಮ್ಮ ಕೆಲಸ, ಸಾಧನೆಯೇ ಉತ್ತರವಾಗಬೇಕು. ಅದರ ಮುಂದೆ ಚಕಾರ ಎತ್ತಲಾರರು.
ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಒಂದು ಪಾಠವೆಂದು ಸ್ವೀಕರಿಸಿ. ಆಗ ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿ ಸಮಸ್ಯೆಯೂ ನಮಗೆ ಜೀವನ ಪಾಠವಾಗುತ್ತದೆ.
ನೀವು ಎಷ್ಟೇ ಉನ್ನತ ಹುದ್ದೆಗೇರಿದರೂ ತಲೆಬಾಗುವುದನ್ನು ತಪ್ಪಿಸಿಬೇಡಿ ಒಲಂಪಿಕ್ಸ್‍ನಲ್ಲಿ ಮೊದಲಸ್ಥಾನ ಗಳಿಸಿದವರೂ ಪದಕ ಹಾಕಿಸಿಕೊಳ್ಳುವಾಗ ತಲೆ ಬಾಗುತ್ತಾರೆ. ತಗ್ಗಿ-ಬಗ್ಗಿ ನಡೆದರೆ ಎಂದೂ ಅಪಾಯವಿಲ್ಲ.
ಸಮಸ್ಯೆಗಳಿಂದ ಓಡಿಹೋದರೆ ಪರಿಹಾರದಿಂದ ದೂರ ಹೋದಂತೆ (ಪಲಾಯನ ವಾದ). ಸಮಸ್ಯೆ ಎದುರಾದಾಗ ಧೈರ್ಯದಿಂದ ಎದುರಿಸಬೇಕೇ ಹೊರತು ಪಲಾಯನ ಮಾಡಬಾರದು.
ನಾನು ಸಾಮಾನ್ಯನಲ್ಲ, ನನ್ನಲ್ಲಿ ಅಸಾಧಾರಣ ಸಾಮಥ್ರ್ಯವಿದೆ ಎಂದು ಭಾವಿಸಿ. ಏಕೆಂದರೆ ದೇವರು ನಿರುಪಯುಕ್ತ ವ್ಯಕ್ತಿಯನ್ನು ಸೃಷ್ಟಿಸುವುದಿಲ್ಲ ಎಂದು ತಿಳಿಯಿರಿ. ನಿಮ್ಮ ಹಾಗೂ ಬೇರೆಯವರ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ.
ಪ್ರತಿಯೊಂದು ವಿಚಾರದ ಬಗ್ಗೆ ಎರಡು ವಿಧಗಳಲ್ಲಿ ಚಿಂತಿಸಬಹುದು-ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ. ಧನಾತ್ಮಕವಾಗಿ ಚಿಂತಿಸಿದಾಗ ಅದು ಸಂತೋಷ ತರುತ್ತದೆ. ಋಣಾತ್ಮಕವಾಗಿ ಚಿಂತಿಸಿದಾಗ ಅದು ಸಂತೋಷ ತರುತ್ತದೆ. ಋಣಾತ್ಮಕವಾಗಿ ಚಿಂತಿಸಿದಾಗ ಅದು ದು:ಖಕ್ಕೆ ಕಾರಣವಾಗುತ್ತದೆ. ಹಾಗಾಗಿ ನಾವು ಎಂದಿಗೂ ಧನಾತ್ಮಕವಾಗಿ ಚಿಂತಿಸಿ ಸಂತೋಷವಾಗಿರೋಣ.
ಪ್ರಯತ್ನ ಎಂಬುದು ಸಣ್ಣ ಪದವಾಗಿರಬಹುದು. ಆದರೆ ಅದು ತರುವ ಪರಿಣಾಮ ಮಾತ್ರ ಅಗಾಧ. ಎಂಥ ಸೋಲನ್ನಾದರೂ ಗೆಲ್ಲುವಂತೆ ಮಾಡುವ ಶಕ್ತಿ ಅದಕ್ಕಿದೆ. ಪ್ರಯತ್ನವೊಂದೇ ನಮ್ಮನ್ನು ಜೀವನ್ಮುಖಿಯಾಗಿಡುವುದು.
ನಾವು ಇಂದು ಏನಾಗಿದ್ದೇವೋ ಅದಕ್ಕೆ ನಮ್ಮ ಯೋಚನೆಗಳೇ ಕಾರಣ. ನಮ್ಮನ್ನು ರೂಪಿಸುವುದು ನಮ್ಮ ಆಲೋಚನೆಗಳು. ಆದ್ದರಿಂದ ನಮ್ಮ ಆಲೋಚನೆಗಳು ಸರಿಯಾಗಿರಬೇಕು. ಮಾತಿಗಿಂತ ಚಿಂತನೆ ಮುಖ್ಯ. ನಮ್ಮ ಆಲೋಚನೆಗಳು ಸದಾ ನಮ್ಮ ಏಳಿಗೆಗೆ ಪೂರಕವಾಗಿರಬೇಕು.
ಉತ್ತಮ ನಡತೆ ಮತ್ತು ಮನಸ್ಸು ಇವೆರಡನ್ನೂ ಬೆಳೆಸಿಕೊಳ್ಳಬೇಕಾದದ್ದು ಅನಿವಾರ್ಯ. ಏಕೆಂದರೆ ಇವುಗಳು ಒಂದಕ್ಕೊಂದು ಹೊಂದಿಕೊಂಡಾಗ ಮಾತ್ರ ನಿಮಗೆ ಮತ್ತು ಇತರರಿಗೆ ತಾತ್ಕಾಲಿಕ ಹಾಗೂ ಶಾಶ್ವತ ಆನಂದಗಳು ದೊರೆಯುವುದು ಸಾಧ್ಯ.
ಅಸಾಧ್ಯವೆಂಬುದು ಒಂದು ಪದವಲ್ಲ. ಪ್ರಯತ್ನ ಮಾಡದೇ ಇರುವುದಕ್ಕೆ ಕೈಲಾಗದವರು ಕೊಡುವ ಒಂದು ಕಾರಣ. ಪ್ರಯತ್ನಪಟ್ಟರೆ ಎಲ್ಲವನ್ನೂ ಸಾಧಿಸಬಹುದು. ಅನೇಕ ಬಾರಿ ನಾವು ಪ್ರಯತ್ನವನ್ನೇ ಮಾಡಿರುವುದಿಲ್ಲ.
ತಪ್ಪು ಮಾಡಬಾರದು. ಒಂದೊಮ್ಮೆ ತಪ್ಪು ಮಾಡಿದರೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಾರದು. ತಪ್ಪನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಮಾಡದ ತಪ್ಪಿನಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ತಿದ್ದಿಕೊಳ್ಳುವುದು.[೧]